Feb 11, 2016

ಅಮ್ಮನ ನೆನಪು

ಅಮ್ಮ ನಮ್ಮನ್ನಗಲಿ ಸರಿಸುಮಾರು ೫ ವರ್ಷಗಳಾಗುತ್ತ ಬಂತು. ಇಷ್ಟು ಕಾಲ ಸರಿದ ಮೇಲೂ ಅಮ್ಮನ ಮಧುರ ನೆನಪುಗಳು ಆಗ್ಗಿಂದಾಗ್ಗೆ ಕಣ್ಮುಂದೆ ಸರಿದು ಹೋಗುತ್ತಲೇ ಇರುತ್ತವೆ. ನಮ್ಮೊಡನೆ ಅಮ್ಮ ಈಗ ಇಲ್ಲದಿದ್ದರೇನಂತೆ, ಅಮ್ಮನೊಡನೆ ಹಂಚಿಕೊಂಡ ಸಂತಸದ ದಿನಗಳ ನೆನಪುಗಳ ಮರುಕಳಿಕೆ ಕಡಿಮೆಯಾಗುವ ಲಕ್ಷಣವಂತೂ ಕಾಣುತ್ತಿಲ್ಲ. ಅಮ್ಮನ ಕೆಲ ವಿಶೇಷ ಗುಣಲಕ್ಷಣಗಳ ಮತ್ತು ಅಮ್ಮ ಭಾಗಿಯಾದ ಕೆಲ ಸ್ಮರಣೀಯ ಘಟನಾವಳಿಗಳ ಬಗ್ಗೆ ಬರೆಯಬೇಕೆಂದು ನನಗೆ ಬಹಳ ಸಮಯದಿಂದ ತುಡಿತವಿತ್ತು. ಅಂತೂ ಈಗ ಗಳಿಗೆ ಒದಗಿದೆ.

ಮುಗ್ಧತೆಯ ಅವತಾರವೆಂದರೆ ಅದು ನನ್ನಮ್ಮ. ನಯವಂಚನೆ, ಕೋಪ, ಚುಚ್ಚುಮಾತು ಇದಾವುದೂ ತಿಳಿಯದು ಅಮ್ಮನಿಗೆ. ಅಮ್ಮನನ್ನು ಸುಳ್ಳು ಹೇಳಿ ವಂಚಿಸುವುದು ಸುಲಭ. ಇದರ ಲಾಭವನ್ನು ನಾನು ಬಾಲ್ಯದಲ್ಲಿ ಪಡೆದುದು ಸುಳ್ಳಲ್ಲ. ನನ್ನ ತಂಗಿಯನ್ನು ಪ್ರತಿದಿನ ಶಿಶುವಿಹಾರದಿಂದ ಸೈಕಲ್ಲಿನಲ್ಲಿ ಮನೆಗೆ ಕರೆತರುವುದು ನನ್ನ ಹೊಣೆ. ಈ ಜವಾಬ್ದಾರಿಯಿಂದ ನುಣುಚಿಕೊಂಡು ಟ್ಯೂಶನ್ ಇದೆಯೆಂದು ಅಮ್ಮನಿಗೆ ಸುಳ್ಳು ಹೇಳಿ ಟಾಕೀಸಿಗೆ ಹೋಗಿ ಸಿನಿಮಾ ನೋಡಿಕೊಂಡು ಬಂದದ್ದುಂಟು. ಇದಾದರೆ ಅಷ್ಟೇನೂ ನಷ್ಟವಿಲ್ಲದ ವ್ಯವಹಾರ. ಇನ್ನು ಅಮ್ಮ ತನ್ನ ಮುಗ್ಧತೆಯಿಂದ ಬಲಿಪಶುವಾಗುತ್ತಿದ್ದುದು salesmenಗಳ ಮರುಳುಮಾತಿಗೆ. ಮಾತಿಗೆ ಸಿಕ್ಕ ಈ ಮೋಡಿಗಾರರೆಲ್ಲ ಅಮ್ಮನಿಗೆ ಏನಾದರೂ ಕಸಕಂತೆಯನ್ನು ಮಾರಿಹೋಗುವವರೇ.


ಅಪ್ಪ ತಂಗಿಯೊಡನೆ ಅಮ್ಮ. ಅಂದಾಜು ವರ್ಷ 1995.

ಕ್ರಿಕೆಟ್ ವೀಕ್ಷಣೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಳು ಅಮ್ಮ. ಆಟದ ನೀತಿನಿಯಮಗಳನ್ನು ಅರ್ಥ ಮಾಡಿಕೊಂಡಿದುದು ಅಷ್ಟಕ್ಕಷ್ಟೇ. ನಮ್ಮ Batsman out ಆದರೆ 'ಅಯ್ಯೋ ಥು' ಎಂದು ಗೋಳಾಡುವ ಅಮ್ಮ ಮರುಗಳಿಗೆಯಲ್ಲಿ ಮತ್ತದೇ ವಿಕೆಟ್ ಪತನವನ್ನು slow motionನಲ್ಲಿ ತೋರಿಸಿದಾಗ 'ಥುತ್ ಮತ್ತೊಂದ್ ಬಿತ್ತು' ಎಂದು ಬಡಿದುಕೊಳ್ಳುವಳು. ಆಟ ನೋಡಬೇಕೆಂದು ಬಯಸುವ ಕ್ರಿಕೆಟ್ ಆಸಕ್ತನಿಗೆ ಅಮ್ಮನ ಜೊತೆ ಕುಳಿತು ನೋಡುವುದೆಂದರೆ ಅದೊಂದು ಮೊಜುಭರಿತ ಹಿಂಸೆಯ ಅನುಭವವೇ. ಇದರೊಡನೆ ಬೆಳಗಾದರೆ ದಿನಪತ್ರಿಕೆಯಲ್ಲಿ ಕ್ರಿಕೆಟ್ ಸುದ್ದಿಗಳನ್ನು ಗಟ್ಟಿಯಾಗಿ ಓದುವುದು ಅಮ್ಮನಿಗೆ ರೂಢಿ. ಆಕೆ ಓದುವುದನ್ನು ಕೇಳಲು ಮನೆಯಲ್ಲಿ ಯಾರೂ ಆಸಕ್ತಿ ತೋರದಿದ್ದರೂ ಆಕೆಯ ಕ್ರೀಡಾವಾಚನ ನಿಲ್ಲುತ್ತಿರಲಿಲ್ಲ.

ಕನ್ನಡ ಸಿನಿಮಾ ನೋಡುವ ಅಭಿರುಚಿ ತುಸು ಜಾಸ್ತಿಯೇ ಅಮ್ಮನಿಗೆ. ಹಾಗೆಂದು ಇಷ್ಟಪಟ್ಟು ಹೋದ ಸಿನೆಮಾಗಳಲ್ಲಿ ಅರ್ಧ ವೇಳೆ ಥೇಟರಿನಲ್ಲಿ ನಿದ್ದೆ ಮಾಡಿ ಕಳೆಯುವುದು ಅಪರೂಪದ ಸಂಗತಿಯೇನಲ್ಲ. ಪುನೀತ್ ರಾಜಕುಮಾರ್ ಸಿನಿಮಾಗಳಿಗೆ ತಪ್ಪದೆ ಹಾಜರ್. ಅವನ ಡಾನ್ಸ್ ಇಷ್ಟ ಅಮ್ಮನಿಗೆ. ಹಾಗೆಯೇ ವಿಷ್ಣುವರ್ಧನ್ ನನ್ನು ಡಾ. ರಾಜಕುಮಾರ್ ಗೆ ಹೋಲಿಸಿ ಕೆಳಸ್ಥರದಲ್ಲಿ ಕೂಡಿಸುವುದು ಮಾಮೂಲಿ. ರಾಜ್ ಡಾನ್ಸ್ ಮುಂದೆ ವಿಷ್ಣುವಿನ ಕುಣಿತ ಯಾವ ಸಾಟಿ ಎಂದು ಹೀಗಳೆಯುವಳು. ನಾನು ಮೂಗಿನಡಿಯಲ್ಲಿ - 'ರಾಜ್ ಎಷ್ಟು ಚಂದ ಡಾನ್ಸ್ ಮಾಡ್ತಿದ್ದ್ರು ನಂಗ್ ಗೊತ್ತು ಸುಮ್ನಿರು' ಎಂದು ಅಸಡ್ಡೆಯಿಂದ ಗೊಣಗುತ್ತಿದ್ದೆ.

ಅಮ್ಮ ಜನರೊಡನೆ ಬೆರೆಯುತ್ತಿದ್ದುದು ಕಡಿಮೆ. ನಾಚಿಕೆಯ ಸ್ವಭಾವದ ಅಮ್ಮ ಅಂಥ ಮಾತಿನ ಮಲ್ಲಿಯಲ್ಲ. ಮನೆಯ ಅಕ್ಕಪಕ್ಕದ ಹೆಂಗಸರೆಲ್ಲ ಮಧ್ಯಾಹ್ನ/ಸಂಜೆಯ ಹೊತ್ತಿನಲ್ಲಿ ಬೀದಿಬದಿಯ ಹರಟೆಯಲ್ಲಿ ತೊಡಗಿದ್ದರೆ ಅಮ್ಮ ಅದರಲ್ಲೆಂದೂ ಭಾಗಿಯಾದವಳಲ್ಲ. ಮನೆಯ ಕಿಟಕಿಯ ಪರದೆ ಸರಿಸಿ ಹೊರಗೆ ನೆರೆಹೊರೆಯವರ ಹರಟೆಯನ್ನು ಮರೆಯಲ್ಲಿ ನಿಂತು ಗಮನಿಸುವ ಗೂಢಚಾರಿಕೆಯೇ ಅಮ್ಮನಿಗೆ ಖುಶಿ. ಹೀಗೆ ಗೂಢಚಾರಿಕೆ ಮಾಡುತ್ತಲೇ ಅಮ್ಮ ನಮ್ಮ ಮನೆಯ ಮುಂದಿನ ತೋಟಕ್ಕೆ ಭೇಟಿ ನೀಡುವ ಹಕ್ಕಿಗಳನ್ನು ಅದೆಷ್ಟೋ ಬಾರಿ ಪಕ್ಷಿಶಾಸ್ತ್ರಜ್ಞಳಂತೆ ಅಭ್ಯಾಸ ಮಾಡಿದ್ದುಂಟು.


ದೀಪಾವಳಿಯ ಸಂಭ್ರಮದಲ್ಲಿ ಅಮ್ಮ - ಮಗಳು. ಅಂದಾಜು ವರ್ಷ 1997 - 98.

ತನ್ನದೇ ಆದ ಚಿಕ್ಕ ಪರಿಧಿಯಲ್ಲಿ ಅಮ್ಮ ಮಾಡಿದ ದಾನ, ಧರ್ಮ, ಅಳಿಲುಸೇವೆಗಳು ಬಹಳ ದೊಡ್ದವೇ. ಪ್ರಾಣಿದಯೆಯು ಅತಿಯೇ ಅಮ್ಮನಿಗೆ. ಮನೆಯ ಸುತ್ತಲಿನ ಪರಿಸರದ ಬೀದಿನಾಯಿಗಳಿಗೆಲ್ಲ ಅಮ್ಮ ಅಚ್ಚುಮೆಚ್ಚಿನ ಕೊಡುಗೈ ದಾನಿ. ಅದೇಕೆ ಗೊತ್ತೇ? ಬೇಕರಿಯಿಂದ ಬ್ರೆಡ್ ಕೊಂಡು ತಂದು ಬೀದಿ ನಾಯಿಗಳಿಗೆ ಹಾಕುವ ಪರಿಪಾಠವಿತ್ತು ಅಮ್ಮನಿಗೆ. ಇದು ಒಂದೆರಡು ದಿನಗಳ ಶೋಕಿಯಲ್ಲ. ಪ್ರತಿದಿನದ ವಾಡಿಕೆಯಿದು. ಪ್ರತಿದಿನ ಕಡಿಮೆಯೆಂದರೂ 8 - 10 ರೂಪಾಯಿಗಳ ಮನುಷ್ಯಯೋಗ್ಯ ಬ್ರೆಡ್ ನಾಯಿಗಳಿಗೆ ದಾನ ಮಾಡುವ ಕಾರ್ಯ ಬಹಳ ಕಾಲ ಅಡಚಣೆಯಿಲ್ಲದೆ ನಡೆಯಿತು ನಮ್ಮ ಧರ್ಮಛತ್ರದಲ್ಲಿ.

ಹೀಗೆ ನಮ್ಮ ಮನೆಯ ಸೇವೆ ಸೌಲಭ್ಯಗಳಿಗೆ ಹೊಂದಿಕೊಂಡ ನಾಯಿಯೊಂದು ನಮ್ಮ ಮನೆಯ ಹೊರಗಿನ ಆವರಣದಲ್ಲಿ 6-7 ಮರಿಗಳನ್ನು ಹೆತ್ತಿತ್ತು. ನಾವೆಲ್ಲರೂ ಅವಕ್ಕೆ ಹಾಲು ಆಹಾರದ ಉಪಚಾರ ನಡೆಸಿದ್ದೆವು. ಇಂತಿಷ್ಟು ಮರಿಗಳಲ್ಲಿ ಕೆಲವು ಕ್ರಮೇಣ ನಾಪತ್ತೆಯಾದವು. ಇನ್ನೊಂದಿಷ್ಟು ಮರಿಗಳು ಪ್ರಕೃತಿಯ ವಿವಿಧ ಹೊಡೆತಗಳು, ಶತ್ರುಪ್ರಾಣಿಗಳ ದಾಳಿಗೆ ಬಲಿಯಾಗಿ ಕೊನೆಗೊಂದು ಮರಿ ಉಳಿದಿತ್ತು. ನಮ್ಮ ಮನೆಯ ನಾಯಿಮರಿಯೇ ಆಗಿಹೋದ ಇದನ್ನು ಅಮ್ಮ ಹೆಚ್ಚೇ ಆಪ್ತವಾಗಿಸಿಕೊಂಡಿದ್ದಳು. ಮುಂದೊಂದು ದಿನ ಇದೂ ಮಾಯವಾಯಿತು. ಅಮ್ಮ ಆ ದಿನ ಸ್ನಾನದ ನೆಪದಲ್ಲಿ ಬಚ್ಚಲು ಮನೆ ಸೇರಿ ಕಣ್ಣೀರಾಗಿದ್ದಳು. ಅಮ್ಮನ ಸಂಕಟವನ್ನು ಕಂಡು ನಾನು ಸೈಕಲ್ ಹತ್ತಿ ನಮ್ಮ ಮನೆಯ ಹಿಂದಿನ ಬಡಾವಣೆಗೆ ಹೋಗಿ ಎಲ್ಲಾದರೂ ನಾಪತ್ತೆಯಾದ ನಮ್ಮ ನಾಯಿಮರಿ ಕಾಣುವುದೇ ಎಂದು ಹುಡುಕಹತ್ತಿದ್ದೆ. ನಮ್ಮ ಮರಿ ಕಾಣದಿದ್ದರೂ ಅದನ್ನು ಹೋಲುವ ಇನ್ನೊಂದು ಮರಿ ಬೀದಿಯಲ್ಲಿ ಓಡಾಡಿಕೊಂಡಿತ್ತು. ಅದನ್ನು ಮೇಲೆತ್ತಿ ಹಿಡಿದು ಸೈಕಲ್ನಲ್ಲಿ ಮನೆಗೆ ಕರೆತಂದೆ. ಅದನ್ನು ನೋಡಿ ಅಮ್ಮನ ಮುಖ ತುಸು ಅರಳಿತು. ನಮ್ಮ ದುರದೃಷ್ಟಕ್ಕೆ ಮುಂಚಿನ ಮರಿಗಳನ್ನು ಹೆತ್ತ ನಾಯಿಯು ತನ್ನದಲ್ಲದ ಈ ಮರಿಯ ಮೇಲೆ ದಾಳಿ ಮಾಡಲೆರಗಿತು. ದೊಡ್ಡ ನಾಯಿಯನ್ನು ಓಡಿಸಿ ಮರಿಯನ್ನು ಇಲ್ಲೇ ಬಿಟ್ಟರೆ ಅದಕ್ಕೆ ಉಳಿಗಾಲವಿಲ್ಲವೆಂದು ಅದನ್ನು ಸಿಕ್ಕ ಜಾಗದಲ್ಲಿಯೇ ಬಿಟ್ಟು ಬಂದೆ. ಇಷ್ಟೆಲ್ಲಾ ಪ್ರಸಂಗವಾದ ಮೇಲೆ ಮತ್ತಾವ ನಾಯಿಯನ್ನೂ ಆವರಣದೊಳಗೆ ಬಿಟ್ಟು ಸಲಹಲಿಲ್ಲ ನಾವು. ಸಾಕುಪ್ರಾಣಿಗಳ ಸಹವಾಸಕ್ಕೆ ಪೂರ್ಣವಿರಾಮ ಹಾಕಿದೆವು. ನಮ್ಮೆಲ್ಲರ ಬದುಕಿನಲ್ಲಿ ಕೆಲಸಮಯ ಹೊಕ್ಕಿ ಹೋದ ಮತ್ತೊಂದು ನಾಯಿಗೆ ನಾನು/ಅಮ್ಮ ಚರ್ಚಿಸಿ ದಯಪಾಲಿಸಿದ ನಾಮಧೇಯ 'ಲಾರಾ'.

ಹೊಳೆವ ಕಂಗಳ ಯುವಜೋಡಿ - ಅಪ್ಪ ಅಮ್ಮ 80ರ ದಶಕದ ಹೊಸಿಲಲ್ಲಿ 

ನನ್ನ ಶಾಲೆಯು ಬೇಸಿಗೆಯ 3 ತಿಂಗಳು ರಜೆಗೆ ಬಂದ್ ಆದಾಗ ನಾನು ನನ್ನ ಅಜ್ಜಿಯೂರು ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಹೋಗುವುದು ರೂಢಿ. ಈ ಮೂರು ತಿಂಗಳು ಆಗ ಧಾರವಾಡದಲ್ಲಿ ಬ್ಯಾಂಕಿನಲ್ಲಿ ದುಡಿಯುತ್ತಿದ್ದ ನನ್ನಮ್ಮನಿಗೆ ಪುತ್ರವಿರಹದ ಸಂಕಟ. 90ರ ದಶಕದಲ್ಲಿ ಆಗಿನ್ನೂ STD ಫೋನುಗಳು ಮಾಮೂಲಾದ ಕಾಲವಲ್ಲ. ಆಗ ನಾವು ಪತ್ರಗಳನ್ನು ಬರೆದುಕೊಳ್ಳುತ್ತಿದ್ದೆವು. ಅಪ್ಪ ಅಮ್ಮನಿಂದ ಕಾಗದ ಬಂದಾಗ ಆಗುವ ಸಂಭ್ರಮದ ಸೊಗಸೇ ಬೇರೆ. ಆ ಪತ್ರಗಳಿಗೆ ಉತ್ತರಿಸಲು ಕೂಡುವುದು ಮತ್ತೊಂದು ಬಗೆಯ ಖುಶಿ. ಒಂದು ಪತ್ರದಲ್ಲಿ ಅಮ್ಮ ಬರೆದಿದ್ದಳು - ಅಪ್ಪ ಅಮ್ಮ ಪ್ರತಿ ರಾತ್ರಿ ಊಟಕ್ಕೆ ಕುಳಿತಾಗ ನಾನು ಜೊತೆಗಿಲ್ಲದಿದ್ದರೂ ನನ್ನ ನೆನಪಿಗೆ ನನ್ನ ಊಟದ ತಟ್ಟೆಯನ್ನು ಅವರಿಬ್ಬರ ತಟ್ಟೆಗಳೊಡನೆ ಇಡುತ್ತಿದ್ದಳಂತೆ.

ಅಪ್ಪ ಒಂದೆರಡು ವರ್ಷ ಬೇರೆ ಊರಿನಲ್ಲಿ ದುಡಿಯುತ್ತಿದ್ದ ಸಮಯವದು. ಆಗೊಂದು ದಿನ ನಾನು ಅಮ್ಮ ಮತ್ತು ನನ್ನ ತಂಗಿ North Indian ಖಾದ್ಯಗಳನ್ನು ಸವಿಯಲು ಧಾರವಾಡದ ಒಂದು ಪ್ರಸಿದ್ಧ ಹೋಟೆಲಿಗೆ ಹೋಗಿದ್ದೆವು. ಭರ್ಜರಿಯಾಗಿಯೇ ಸಾಗಿತು ನಮ್ಮ ಸೂಪ್, ರೋಟಿ, ಪನೀರ್ ಮಸಾಲ, ಕಾಶ್ಮೀರಿ ಪಲಾವ್ ಗಳ ಭೂರಿ ಭೋಜನ. ಕಂಠಮಟ್ಟ ತಿಂದುಂಡು ತೇಗಿ ಸಂತೃಪ್ತರಾಗಿ ಕುಳಿತಿರಲು ಕೊನೆಯಲ್ಲಿ ಮಾಣಿಯು bill ತಂದಿಟ್ಟ. ಅಮ್ಮ ದುಡ್ಡಿಡಲು ತನ್ನ ಪರ್ಸು ತೆರೆದು ನೋಡಿ ತಡಕಾಡಲು ತೊಡಗಿದಳು. ಆಕೆಯ ಹುಡುಕಾಟವನ್ನು ನೋಡುತ್ತಾ ಇದೇನು ಅಮ್ಮನ ಮುಖದಲ್ಲಿ ಭೀತಿಯ ಛಾಯೆ ಬೆಳೆಯುತ್ತಿದೆಯಲ್ಲ ಎಂದು ನಾನು ಗಾಬರಿಯಾದೆ. Billಗೆ ಆಗುವಷ್ಟು ದುಡ್ಡಿಲ್ಲ ಪರ್ಸಿನಲ್ಲಿ ಎಂದು ನಾನು ನಿರೀಕ್ಷಿಸಿದ್ದಂತೆಯೇ ಅಮ್ಮ ಉಲಿದಳು ಗಂಟಲು ಒಣಗಿದ ಕೀಚಲು ಧ್ವನಿಯಲ್ಲಿ. ಅಯ್ಯೋ ಈಗೇನು ಮಾಡೋಣ ಎಂದು ಎಲ್ಲರ ಎದೆ ಡವಡವ. ಜನರ ಮುಂದೆ ಅದೇನು ಅವಮಾನ ಕಾದಿದೆಯೋ ಎಂಬ ಆತಂಕದಲ್ಲಿ ಚಡಪಡಿಸುತ್ತಿದ್ದಾಗ ಅಮ್ಮನಿಗೆ ಸುದೈವದಿಂದ ನೆನಪಾದದ್ದು ಹೋಟೆಲಿನ ಹೊರಗೆ ಪಾನ್ ಅಂಗಡಿ ಇಟ್ಟಿದ್ದ ಅಮ್ಮ ದುಡಿಯುತ್ತಿದ್ದ ಬ್ಯಾಂಕಿನ ಗಿರಾಕಿ. ಆ ವೀಳ್ಯದೆಲೆ ಕಟ್ಟುವ ಮಹಾಮಹಿಮನಿಗೆ ಅಮ್ಮ ಬ್ಯಾಂಕಿನಲ್ಲಿ ಹಲವು ಬಾರಿ ನೆರವಾಗಿದ್ದಳಂತೆ. ನಾವು ಆತನಿಂದ ತ್ವರಿತವಾಗಿ ಕೈಸಾಲ ಪಡೆದು ಅಂತೂ ಗೌರವಯುತವಾಗಿ ಹೋಟೆಲಿನಿಂದ ಮನೆ ಸೇರುವಷ್ಟರಲ್ಲಿ ತಿಂದ ಮೃಷ್ಟಾನ್ನವೆಲ್ಲ ಭಯಬೆವರ ರೂಪದಲ್ಲಿ ಕರಗಿಯಾಗಿತ್ತು.


ತಂಗಿಯ ಮೊದಲ ಹುಟ್ಟುಹಬ್ಬದಂದು ನಾನು, ತಂಗಿ ಮತ್ತು ನಮ್ಮಮ್ಮ. ಜನವರಿ 6, 1995.

ಅಮ್ಮನ ನೆನಪುಗಳು ಮೊಗೆದಷ್ಟೂ ಮುಗಿಯವು. ಈ ಮನಮುದಗೊಳಿಸುವ ಜೀವನಾನುಭವಗಳನ್ನು ಮತ್ತೊಮ್ಮೆ ಮಗದೊಮ್ಮೆ ಕೆದಕಿ ಗತವೈಭವದ ಸಂತಸವನ್ನು ಸವಿಯಲು ನಾನು ಸರಿದು ಹೋದ ಕಾಲದೊಳಕ್ಕೆ ಆಗಾಗ ಹೊಕ್ಕಿ ಬರುತ್ತಿರುತ್ತೇನೆ. ಈ ಹಿನ್ನೋಟಗಳ ತೀವ್ರತೆ ಸಮಯ ಉರುಳಿದಂತೆ ಮಾಸದಿರಲೆಂದು ಇಲ್ಲಿ ಅಕ್ಷರಗಳಲ್ಲಿ ಅಚ್ಚಿಳಿಸಿರುವೆ.